ಬಳ್ಳಾರಿ,ನ.1: ಪ್ರತಿಯೊಂದು ಹೆಜ್ಜೆಯಲ್ಲಿ ಕನ್ನಡದ ಅಸ್ತಿತ್ವ ಪ್ರತಿಫಲಿಸಲು ಮುಂದಿನ ದಿನಗಳಲ್ಲಿ ಕನ್ನಡ ಭಾಷೆ ಉಳಿಸಿ ಬೆಳೆಸುವ ಕಾರ್ಯವಾಗಬೇಕಿದೆ. ಇದು ಕೇವಲ ಸರ್ಕಾರದ್ದಲ್ಲ, ಬದಲಾಗಿ ಎಲ್ಲಾ ಸಾರ್ವಜನಿಕರು, ಸಂಘ-ಸಂಸ್ಥೆಗಳು ಭಾಗವಹಿಸುವಿಕೆಯ ಅಗತ್ಯವಿದೆ ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಅವರು ಹೇಳಿದರು.
ಶನಿವಾರ ಜಿಲ್ಲಾಡಳಿತ ನಗರದ ಸರ್ಕಾರಿ (ಮಾಜಿ ಪುರಸಭೆ) ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ 70ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣಾ ನೆರವೇರಿಸಿ, ಶ್ರೀ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಬಳಿಕ ಅವರು ರಾಜ್ಯೋತ್ಸವದ ಸಂದೇಶ ನೀಡಿದರು.
ಕೇವಲ ಇಂಗ್ಲೀಷ್ ಓದಿದರೆ ಕೆಲಸ ಸಿಗುವುದಿಲ್ಲ. ಚೀನಾ, ಜಪಾನ್ ನಂತಹ ದೇಶಗಳು ಅಭಿವೃದ್ಧಿ ಹೊಂದಿರುವುದು ತಮ್ಮ-ತಮ್ಮ ಮಾತೃ ಭಾಷೆಯಲ್ಲಿಯೇ. ಹಾಗಾಗಿ ನಮ್ಮ ಕನ್ನಡ ಭಾಷೆ, ನಮ್ಮತನ ಬೆಳೆಸೋಣ ಎಂದು ಕಿವಿಮಾತು ಹೇಳಿದರು.
ಕನ್ನಡ ನಮ್ಮ ಉಸಿರು, ಕನ್ನಡಾಂಬೆ ತಾಯಿ ಸ್ಥಾನ ತುಂಬಿದವಳು. ಕನ್ನಡ ಭಾಷೆಗೆ ತನ್ನದೇ ಆದ ಅಸ್ಮಿತೆ ಒಳಗೊಂಡಿದ್ದು, 2,500 ವರ್ಷಗಳ ಇತಿಹಾಸ ಹೊಂದಿದೆ. ವಿಶ್ವಗುರು ಬಸವಣ್ಣ ಸೇರಿದಂತೆ ಅನೇಕ ವಚನಕಾರರು, ಸಂತರು ತಮ್ಮ ವಚನಗಳನ್ನು ಕನ್ನಡದಲ್ಲಿಯೇ ರಚಿಸಿದ್ದಾರೆ. ಪರ ರಾಜ್ಯಗಳಿಗೆ ಹೋಲಿಸಿದರೆ ಕನ್ನಡ ಭಾಷೆಯು ಯಾವುದೇ ಜಾತಿ, ಧರ್ಮ, ಭೇದ-ಭಾವವಿಲ್ಲದೇ ಯಾರಿಗೂ ಅಡಚಣೆಯಾಗದೇ ಸುಲಲಿತವಾಗಿ ಬಾಳ್ವೆ ನಡೆಸಲು ಅನುವು ಮಾಡಿದೆ ಎಂದರು.
ಸ್ವಾತಂತ್ರ್ಯ ಪೂರ್ವದಿಂದಲೂ ಚಾಲ್ತಿಯಲ್ಲಿದ್ದ ಕರ್ನಾಟಕ ಏಕೀಕರಣ ಚಳುವಳಿಯ ಫಲವಾಗಿ, ರಾಜ್ಯಗಳ ಮರುಸಂಘಟನೆ ಕಾಯ್ದೆಯಡಿ 1956ರ ನವೆಂಬರ್ 1ರಂದು ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂತು. ಬಳಿಕ ಮುಂಬೈ, ಮದ್ರಾಸ್, ಹೈದರಾಬಾದ್ ಪ್ರಾಂತ್ಯಗಳಲ್ಲಿ ಹರಡಿದ್ದ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಂದುಗೂಡಿಸಲಾಯಿತು. ಬಳಿಕ 1973ರ ನವೆಂಬರ್ 1 ರಂದು ಅಂದಿನ ಸಿಎಂ ದೇವರಾಜ ಅರಸು ಅವರ ಅವಧಿಯಲ್ಲಿ ಮೈಸೂರು ರಾಜ್ಯವನ್ನು ಅಧಿಕೃತವಾಗಿ ‘ಕರ್ನಾಟಕ’ ಎಂದು ಮರುನಾಮಕರಣ ಮಾಡಲಾಯಿತು ಎಂದು ತಿಳಿಸಿದರು.
ನವೆಂಬರ್ 1ರಂದು ಆಚರಿಸಲಾಗುವ ಕನ್ನಡ ರಾಜ್ಯೋತ್ಸವು ಕರ್ನಾಟಕದ ಸಂಸ್ಥಾಪನಾ ದಿನವಾಗಿದೆ. 1956 ರ ನವೆಂಬರ್ 1 ರಂದು ಮೈಸೂರು ರಾಜ್ಯವನ್ನು (ಈಗಿನ ಕರ್ನಾಟಕ) ಕನ್ನಡ ಮಾತನಾಡುವ ಎಲ್ಲಾ ಪ್ರದೇಶಗಳನ್ನು ಒಗ್ಗೂಡಿಸಿ ರಚಿಸಲಾಯಿತು ಎಂದು ತಿಳಿಸಿದ ಸಚಿವರು, ಕರ್ನಾಟಕದ ಏಕೀಕರಣದ ಸ್ಮರಣೆ, ಕನ್ನಡ ಭಾಷೆ, ಸಂಸ್ಕೃತಿ ಹಾಗೂ ನಾಡಿನ ಸಾಧಕರನ್ನು, ಹೋರಾಟಗಾರರನ್ನು ಗೌರವಿಸುವ ಕೆಲಸವಾಗಬೇಕು ಎಂದು ಹೇಳಿದರು.
ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಅನೇಕ ಮಹನೀಯರ ಕೊಡುಗೆ ಅಪಾರವಾಗಿದೆ. ಅಂದಿನ ಸಮಯದಲ್ಲಿ ಬಳ್ಳಾರಿಯನ್ನು ಕನ್ನಡ ನಾಡಿನಲ್ಲಿ ಉಳಿಸಿಕೊಳ್ಳಲು ಹೋರಾಡಿದ ಮಹನೀಯರು, ಸಾವಿರಾರು ಕನ್ನಡ ಪ್ರೇಮಿಗಳು, ಕನ್ನಡ ಪರ ಹೋರಾಟಗಾರರ ಪೈಕಿ ಹುತಾತ್ಮ ಪೈಲ್ವಾನ್ ರಂಜಾನ್ ಸಾಬ್ ಅವರ ಸಾಧನೆ ಅನನ್ಯ ಎಂದು ಪ್ರತಿಪಾದಿಸಿದರು.
ಬಳ್ಳಾರಿ ಜಿಲ್ಲೆಯು ವೈವಿಧ್ಯತೆಯಿಂದ ಕೂಡಿದೆ. ಕನ್ನಡ, ತೆಲುಗು, ಉರ್ದು ಭಾಷೆ ಒಳಗೊಂಡಿದ್ದು, ಎಲ್ಲಾ ಸಂಸ್ಕೃತಿಗಳ ಸಮ್ಮಿಲನ ಈ ಜಿಲ್ಲೆಯು ಒಳಗೊಂಡಿದೆ ಎಂದು ಬಣ್ಣಿಸಿದರು.
ಯುವಪೀಳಿಗೆಯಲ್ಲಿ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮೂಡಿಸೋಣ. ಕನ್ನಡ ಭಾಷೆಯ ಬಳಕೆ ಮತ್ತು ಮಹತ್ವದ ಬಗ್ಗೆ ಜಾಗೃತಿ ಮೂಡಿಸೋಣ. ಪ್ರತಿಯೊಬ್ಬರೂ ಕನ್ನಡದಲಿಯೇ ವ್ಯವಹರಿಸೋಣ. ಮಕ್ಕಳಿಗೆ ಕನ್ನಡ ಭಾಷೆಯಲ್ಲಿಯೇ ಶಿಕ್ಷಣ ಕೊಡಿಸೋಣ ಎಂದು ಕರೆ ನೀಡಿದರು.
HTML Website Generator